ಬದಲಿಮತದಾನ - ಮತ ನೀಡಲು ಹಕ್ಕುಳ್ಳ ಮತದಾರನ ಬದಲಿಗೆ ಅವನ ಅನುಮತಿಯೊಡನೆ ಮತ್ತೊಬ್ಬ ವ್ಯಕ್ತಿ ಪ್ರತಿನಿಧಿಸಿ ಮತ ನೀಡುವುದು ಇದನ್ನು ಪ್ರತಿನಿಧಿಮತವೆಂದೂ ಕರೆಯುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿ ತನ್ನ ಮತವನ್ನು ಅಂಚೆ ಮೂಲಕ ಚಲಾಯಿಸಬಹುದು. ಆದರೆ ಒಬ್ಬನ ಅಥವಾ ಒಂದು ಸಂಸ್ಥೆಗೆ ದತ್ತವಾಗಿರುವ ಮತವನ್ನು ಅವನ ಅಥವಾ ಅದರ ಪ್ರತಿನಿಧಿಯಾಗಿ ಮತ್ತೊಬ್ಬ ಚಲಾಯಿಸುವುದನ್ನು ನಮ್ಮ ದೇಶದ ಕಂಪನಿಗಳ ಅಧಿನಿಯಮದಲ್ಲಿ ಒಪ್ಪಲಾಗಿದೆ. ಅಧಿನಿಯಮದ 176ನೆಯಕಲಮು ಈ ಬಗ್ಗೆ ವಿಶೇಷ ಉಪಬಂಧವನ್ನೊಳಗೊಂಡಿದೆ. ಆ ಕಲಮಿನ ಮುಖ್ಯ ಅಂಶಗಳು ಈ ಬಗೆಯಲ್ಲಿವೆ-ಕಂಪನಿಯ ಸಭೆಗೆ ಹಾಜರಾಗಲು ಮತ್ತು ಮತ ನೀಡಲು ಹಕ್ಕುಳ್ಳ ಸದಸ್ಯ ತನ್ನ ಕರ್ತವ್ಯವನ್ನು ಖುದ್ದಾಗಿ ನೆರವೇರಿಸಲು ಅನುಕೂಲವಿಲ್ಲವಾದಾಗ ತನ್ನ ಪ್ರತಿನಿಧಿಯಾಗಿ ಅಂಥ ಸಭೆಗೆ ಹಾಜರಾಗಲು ಮತ್ತು ಮತ ನೀಡಲು ಬರಹದ ಮೂಲಕ ತನ್ನ ಪ್ರತಿನಿಧಿಯನ್ನು ನೇಮಕ ಮಾಡಬಹುದು. ಆದರೆ ಆ ಪ್ರತಿನಿಧಿಗೆ ಸಭೆಯಲ್ಲಿ ಮಾತನಾಡುವ ಹಕ್ಕು ಇರುವುದಿಲ್ಲ. ಈ ಉಪಬಂಧವನ್ನು ಕಂಪನಿಯ ನಿಯಮಾವಳಿಗಳು ಅನ್ಯಥಾಹೇಳಿದ ಹೊರತು ಮತ್ತು ಷೇರುಬಂಡವಾಳವಿಲ್ಲದ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಖಾಸಗಿ ಕಂಪನಿಯ ಸದಸ್ಯ ಆಯಾ ಸಭೆಗೆ ಒಬ್ಬನಿಗಿಂತ ಹೆಚ್ಚು ಪ್ರತಿನಿಧಿಗಳನ್ನು ನೇಮಿಸುವಂತಿಲ್ಲ. ಚುನಾವಣೆ ನಡೆದರೆ ಮಾತ್ರ ಪ್ರತಿನಿಧಿ ತನ್ನ ಮತ ಚಲಾಯಿಸುತ್ತಾನೆ.

ಯಾವುದೇ ಕಂಪನಿ ಷೇರು ಬಂಡವಾಳ ಹೊಂದಿರಲಿ ಅಥವಾ ಇಲ್ಲದಿರಲಿ ಆ ಕಂಪನಿಯ ನಿಯಮಗಳು ಮೇಲೆ ತಿಳಿಸಿರುವ ರೀತಿ ಅವಕಾಶ ಕೊಡುವಲ್ಲಿ ಆ ಕಂಪನಿ ಸಭೆ ಕರೆಯುವ ಮುಂಗಡ ತಿಳುವಳಿಕೆ ಪತ್ರದಲ್ಲಿ ಸಭೆಗೆ ಹಾಜರಾಗಲು ಹಕ್ಕುಳ್ಳ ಸದಸ್ಯ ತನ್ನ ಪ್ರತಿನಿಧಿಯನ್ನು ನೇಮಿಸಲು ಮತ್ತು ತನ್ನ ಬದಲು ತನ್ನ ಮತ ಚಲಾಯಿಸಲು ಅಧಿಕಾರ ಕೊಡಲಾಗಿರುವ ವಿಷಯವನ್ನು ಮತ್ತು ಹಾಗೆ ನೇಮಿತನಾದ ಪ್ರತಿನಿಧಿ ಆ ಕಂಪನಿಯ ಸದಸ್ಯನಾಗಿರಬೇಕಾದ ಅವಶ್ಯಕತೆ ಇಲ್ಲ ಎಂಬುದನ್ನು ಎದ್ದು ಕಾಣುವ ರೀತಿಯಲ್ಲಿ ಮುದ್ರಿಸಿ ತಿಳಿಸಬೇಕಾಗುತ್ತದೆ. ಹಾಗೆ ತಿಳಿಸದೆ ಹೋಗುವುದು ದಂಡನಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ಆಯಾ ದಿನಾಂಕಗಳನ್ನೊಳಗೊಂಡ ಪ್ರತಿನಿಧಿ ನೇಮಿತ ಲಿಖಿತ ಪತ್ರವನ್ನು ಸಭೆ ಸೇರುವ 48 ಗಂಟೆಗಳ ಮೊದಲೇ ಕಂಪನಿಯ ಸಂಬಂಧಪಟ್ಟವರಿಗೆ ತಲುಪಿಸಬೇಕು. ಯಾವುದೇ ಕಂಪನಿ ತನ್ನ ನಿಯಮಾವಳಿಯಲ್ಲಿ ಪ್ರತಿನಿಧಿಗಳನ್ನು ನೇಮಿಸುವ ಅವಕಾಶ ಕಲ್ಪಿಸದಿದ್ದ ಪಕ್ಷದಲ್ಲಿ ಆಗ ಪ್ರತಿನಿಧಿಯನ್ನು ನೇಮಿಸುವಂತೆ ಸದಸ್ಯರನ್ನು ಕೇಳುವುದಾಗಲಿ, ಸೂಚಿಸುವುದಾಗಲಿ ದಂಡನಾರ್ಹ, ಪ್ರತಿನಿಧಿ ನೇಮಕ ಬರಹದಲ್ಲಿ ಇರತಕ್ಕದ್ದು. ನೇಮಕ ಮಾಡುವ ಸದಸ್ಯ ಅಥವಾ ಅವನ ಆದೇಶ ಹೊಂದಿದ ಅಧಿಕೃತ ಪ್ರತಿನಿಧಿ ನೇಮಕಪತ್ರಕ್ಕೆ ಸಹಿ ಮಾಡಿರತಕ್ಕದ್ದು ಮತ್ತು ನೇಮಕಮಾಡುವ ಸದಸ್ಯ ಅದಕ್ಕಾಗಿಯೇ ನಿಯಮಿತವಾದ ಆಯಾ ಕಂಪನಿಯ ಸಂಬಂಧಿಸಿದ ಅಧಿಕಾರಿಗಳ ಮುದ್ರೆಯನ್ನೊಳಗೊಂಡಿರುವ ಪತ್ರಗಳನ್ನೇ ಉಪಯೋಗಿಸತಕ್ಕದ್ದು. ಈ ಪ್ರಕಾರವಾಗಿ ಹೇಳಿದ ನಮೂನೆಯಲ್ಲಿ ಪ್ರತಿನಿಧಿಯ ನೇಮಕಾತಿ ಲಿಖಿತ ಇದ್ದರೆ ಅದರ ಸಿಂಧುತ್ವವನ್ನು ಪ್ರಶ್ನಿಸುವಂತಿಲ್ಲ.

ಹಾಜರುಪಡಿಸಲಾದ ಪ್ರತಿನಿಧಿ ಪತ್ರಗಳನ್ನು ಪರೀಕ್ಷಿಸಲಿಚ್ಛಿಸುವ ಯಾವ ಸದಸ್ಯನೆ ಆಗಲಿ ಸಭೆ ನಡೆಯುವುದಕ್ಕೆ 24 ಗಂಟೆಗಳ ಮುಂಚೆ, ಅಥವಾ ಸಭೆ ಮುಗಿದ 24 ಗಂಟೆಗಳೊಳಗೆ ಕಂಪನಿಯ ಕೆಲಸದ ವೇಳೆಯಲ್ಲಿ ಕಂಪನಿಯ ಕಚೇರಿಯಲ್ಲಿ ಪರಿಶೀಲಿಸಬಹುದು. ಇದು ಆಯಾ ಕಂಪನಿಯ ಕಾನೂನು ಸಮಿತಿಯ ಸಲಹೆಯಂತಿರುತ್ತದೆ.

ಅಂದಿನ ಸಭೆಯಲ್ಲಿ ಚುನಾವಣೆ ನಡೆದರೆ ಪ್ರತಿನಿಧಿ ಮತ ಚಲಾಯಿಸಬಹುದು. ಅವನಿಗೆ ಸಭೆಯಲ್ಲಿ ಮಾತನಾಡಲು ಅವಕಾಶವಿಲ್ಲ. ಆದರೆ ಅವನು ಬರಹದಲ್ಲಿ ಪ್ರಶ್ನೆಯನ್ನು ಕೇಳಿ ಪ್ರಶ್ನೆಯನ್ನು ಸಭೆಯ ಅಧ್ಯಕ್ಷನಿಗೆ ಕಳಿಸಲು ಯಾವ ಪ್ರತಿಬಂಧವೂ ಇಲ್ಲ. ಪ್ರತಿನಿಧಿತ್ವವನ್ನು ಯಾವುದೇ ವೇಳೆಯಲ್ಲಿ ಹಿಂತೆಗೆದುಕೊಳ್ಳಬಹುದು ಅಥವಾ ರದ್ದುಪಡಿಸಬಹುದು. ಜಂಟಿ ಷೇರುದಾರರಿದ್ದಲ್ಲಿ ಅವರೆಲ್ಲರೂ ಪ್ರತಿನಿಧಿ ಪತ್ರಕ್ಕೆ ಸಹಿ ಮಾಡಬೇಕು. ಪ್ರತಿನಿಧಿಯನ್ನು ನೇಮಿಸಿದ ಅನಂತರ ಷೇರುದಾರ ತಾನೇ ಸಭೆಗೆ ಹಾಜರಾದರೆ, ಮರಣಪಟ್ಟರೆ ಅಥವಾ ನೋಟೀಸಿನ ಮೂಲಕ ಅದನ್ನು ರದ್ದುಪಡಿಸಿದರೆ ಅದು ರದ್ದಾಗುತ್ತದೆ. ಸಾರ್ವಜನಿಕ ಕಂಪನಿಗೆ ಪೂರಕವಲ್ಲದ ಖಾಸಗೀ ಕಂಪನಿ ಪ್ರಾತಿನಿಧಿಕವಾಗಿ ಮತ ಚಲಾಯಿಸುವುದನ್ನು ನಿಷೇಧಿಸಬಹುದು. ಕರ್ನಾಟಕದ ಸಹಕಾರೀ ಅಧಿನಿಯಮದ ಮೇರೆಗೆ ರಚಿಸಲಾದ ನಿಯಮಗಳಲ್ಲಿಯೂ ಈ ರೀತಿ ನಿಷೇಧವನ್ನು ಸೂಚಿಸಲಾಗಿದೆ.
1976 ಜೂನ್ ತಿಂಗಳಿನಿಂದ ಪ್ರಾತಿನಿಧಿಕ ಮತ ಚಲಾವಣೆಯ ಲಿಖಿತ 30 ಪೈಸೆಯ ಸ್ಟಾಂಪನ್ನೊಳಗೊಂಡ ಕಾಗದವಾಗಿರಬೇಕು.

ಪ್ರಾತಿನಿಧಿಕ ಮತ ಚಲಾವಣೆಯ ಲಿಖಿತ ಪತ್ರ ಪೂರ್ಣ ಭರ್ತಿ ಮಾಡುವವರೆಗೆ ಸಿಂಧುವಾಗುವುದಿಲ್ಲ. ಪ್ರಾತಿನಿಧಿಕ ಮತ ಚಲಾವಣೆಯ ಲಿಖಿತ ಆ ಸಭೆಗಷ್ಟೇ ಅನ್ವಯವಾಗುವುದು.

ಕಂಪನಿಗಳ, ಸ್ವಾಯತ್ತ ಸಂಸ್ಥೆಗಳ ನಿರ್ವಾಹಕರ ಮೇಲೆ ಇದರಿಂದ ಷೇರುದಾರರ ಹಿಡಿತವಿರುತ್ತದೆ. ದೇಶದ ನಾನಾಕಡೆ ಹರಡಿಹೋಗಿದ್ದು ದೂರ ಪ್ರಯಾಣ ಮಾಡಲಾಗದೆ ಸಭೆಗೆ ಬರಲಾಗದವರು ಮತ್ತು ಇತರ ಅನೇಕ ಕಾರಣಗಳಿಂದ ಸಭೆಗೆ ಹಾಜರಾಗಲು ಆಗದವರು ಈ ಬದಲಿಮತದಾನ ವ್ಯವಸ್ಥೆಯ ಮೂಲಕ ತಮ್ಮ ಮತವನ್ನು ಚಲಾಯಿಸಿ ತಮ್ಮ ಅಸ್ತಿತ್ವ ತೋರಬಹುದು. ಇಂಗ್ಲೆಂಡ್, ಅಮೆರಿಕಾ ಮುಂತಾದ ದೇಶಗಳಲೆಲ್ಲಾ ಇದೊಂದು ಪರಿಣಾಮಕಾರಿ ಪದ್ಧತಿಯಾಗಿದೆ.
(ಎಸ್.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ